ಮಹಬೂಬ್ ನಗರ
	ಭಾರತದ ಆಂಧ್ರಪ್ರದೇಶ ರಾಜ್ಯದ ಒಂದು ಜಿಲ್ಲೆ; ಹಾಗೂ ಜಿಲ್ಲಾ ಆಡಳಿತ ಕೇಂದ್ರ ನಗರ. ಈ ಜಿಲ್ಲೆಯನ್ನು ಉತ್ತರದಲ್ಲಿ ರಂಗಾರೆಡ್ಡಿ ಮತ್ತು ಹೈದರಾಬಾದ್ ಜಿಲ್ಲೆಗಳೂ ಪೂರ್ವದಲ್ಲಿ ನಲ್ಗೊಂಡ, ಗುಂಟೂರು; ಆಗ್ನೇಯದಲ್ಲಿ ಪ್ರಕಾಶಮ್ ಜಿಲ್ಲೆಗಳೂ ದಕ್ಷಿಣದಲ್ಲಿ ಕರ್ನೂಲು, ಪಶ್ಚಿಮದಲ್ಲಿ ಕರ್ನಾಟಕ ರಾಜ್ಯದ ಗುಲ್ಬರ್ಗ ಮತ್ತು ರಾಯಚೂರು ಜಿಲ್ಲೆಗಳು ಸುತ್ತುವರೆದಿವೆ. ಕೊಡಂಗಲ, ಮಕ್ತಲ್, ಮಹಬೂಬ್‍ನಗರ, ಜಡಚೇರ್ಲ, ಶಾದ್‍ನಗರ್, ಕಲ್ವಕೂರ್ತಿ, ನಾಗರಕರ್ನೂಲ, ವನಪಾರ್ತಿ, ಆತ್ಮಕೂರು, ಗದ್ವಾಲ್. ಆಲಮಪುರ್, ಕೊಲ್ಲಾಪುರ್ ಆಚಮ್‍ಪೇಟೆ ಇವು ತಾಲ್ಲೂಕುಗಳು. ಜಿಲ್ಲೆಯ ಒಟ್ಟು ವಿಸ್ತೀರ್ಣ 18,432 ಚ.ಕಿ.ಮೀ. ಜನಸಂಖ್ಯೆ 24,44,619 (1981). 

	ಜಿಲ್ಲೆಯ ಪಶ್ಚಿಮ ಗಡಿಯಲ್ಲಿ ಕೃಷ್ಣಾ ಮತ್ತು ಭೀಮಾ ನದಿಗಳು ಕೂಡಿ ಸ್ವಲ್ಪ ದೂರ ಜಿಲ್ಲೆಯ ದಕ್ಷಿಣದ ಗಡಿಯಾಗಿ ಹರಿದು ಕರ್ನೂಲು ಜಿಲ್ಲೆಯಿಂದ ಇದನ್ನು ಬೇರ್ಪಡಿಸಿದೆ. ಜೆಲ್ಲೆಯ ದಕ್ಷಿಣದ ಉದ್ದಕ್ಕೂ ಪೂರ್ವಾಭಿಮುಖವಾಗಿ ಹರಿಯುವ ಈ ನದಿಯ ಉತ್ತರ ದಂಡೆಯುದ್ದಕ್ಕೂ ನೀರಾವರಿಗೆ ಹೆಚ್ಚು ಅನುಕೂಲವಿದ್ದು ವ್ಯವಸಾಯಕ್ಕೆ ಸಹಾಯಕವಾಗಿದೆ. ಜಿಲ್ಲೆಯಲ್ಲಿ ಕೆರೆಗಳ ಸಂಖ್ಯೆ ಹೆಚ್ಚು. ರಾಜೋಲಿಬಂಡಾ ಯೋಜನೆ, ಕೋಮಲ ಸಾಗರ ಮತ್ತು ಸರಲಾ ಸಾಗರ ಎಂಬ ಎರಡು ಮಧ್ಯಮ ತರಗತಿಯ ನೀರಾವರಿ ಯೋಜನೆಗಳಿಂದ ಜಿಲ್ಲೆಯಲ್ಲಿ ನೀರಾವರಿಗೆ ಹೆಚ್ಚು ಅನುಕೂಲವಿದೆ. ಜಿಲ್ಲೆಯಲ್ಲಿ ವರ್ಷಿಕ ಸರಾಸರಿ 86.23 ಸೆಂ.ಮೀ. ಮಳೆ ಬೀಳುವುದು. ಈ ಜಿಲ್ಲೆಯ ಅನೇಕ ಭಾಗಗಳಲ್ಲಿ ಅರಣ್ಯ ಪ್ರದೇಶವಿದೆ. ಜೋಳ. ಕಡಲೆ, ಬತ್ತ. ಅಗಸೆ, ಎಳ್ಳು, ಔಡಲ ಇಲ್ಲಿಯ ಮುಖ್ಯ ಬೆಳೆಗಳು. ಗದ್ವಾಲದಲ್ಲಿ ಕೈ ಮಗ್ಗದ ಬಟ್ಟೆ ತಯಾರಿಕೆ ಹೆಚ್ಚು ಮತ್ತು ಪ್ರಸಿದ್ಧ. ಕೊತ್ತಕೋಟಾ ಎಂಬಲ್ಲಿಯ ಜನ ನೂಲು, ರೇಷ್ಮೆ ಮತ್ತು ಜರಿಯನ್ನು ಒಟ್ಟಿಗೆ ಸೇರಿಸಿ ನೇಯುವಲ್ಲಿ ಪ್ರವೀಣರೆಂದು ಹೆಸರಾಗಿರುವರು. ಜಿಲ್ಲೆಯಲ್ಲಿ ಹೆಚ್ಚು ಬಳೆಯುವ ತುಂಗಾ ಎಂಬ ಹುಲ್ಲಿನಿಂದ ಚಾಪೆಯನ್ನು ತಯಾರಿದುವರು. ಮಹಬೂಬ್‍ನಗರ ಹೈದರಾಬಾದಿನ ನೈಋತ್ಯಕ್ಕೆ ಸುಮಾರು 88 ಕಿ.ಮೀ. ದೂರದಲ್ಲಿದೆ. ಜನಸಂಖ್ಯೆ 87,503 (1981).  ಶಾಲಾಕಾಲೇಜುಗಳಿವೆ. ನಗರ ಆಧುನಿಕ ಸೌಲಭ್ಯಗಳಿಂದ ಕೂಡಿದೆ. ಹತ್ತಿ ಸಂಸ್ಕರಣ ಇಲ್ಲಿಯ ಮುಖ್ಯ ಕೈಗಾರಿಕೆಯಾಗಿದೆ. ಮುಖ ರೈಲು ನಿಲ್ದಾಣವಿದ್ದು. ಉತ್ತವ ಸಾರಿಗೆ ಸಂಪರ್ಕಗಳಿಂದ ಕೂಡಿದೆ.
(ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ